ಆಪ್ಲೈಟ್
ಸೂಕ್ಷ್ಮಕಣಗಳಿಂದ ಕೂಡಿದ ಸಕ್ಕರೆಯಂಥ ರಚನೆಯಿರುವ ಶಿಲೆ. ಸಾಮಾನ್ಯವಾಗಿ ಗ್ರಾನೈಟಿನ ಖನಿಜ ಸಂಯೋಜನೆಯುಳ್ಳ ಶಿಲೆ. ಆದರೆ ಇದರ ಖನಿಜ ಸಂಯೋಜನೆ ಗ್ರಾನೈಟಿನಿಂದ ಗ್ರಾನೊಡೆಯೊರೈಟನ ತನಕ ವ್ಯತ್ಯಾಸ ಹೊಂದಬಹುದು. ಇದು ಸಾಮಾನ್ಯವಾಗಿ ಬೆಣಚು-ಫೆಲ್ಡ್‍ಸ್ಟಾರ್‍ಗಳನ್ನು ಪ್ರಮುಖವಾಗಿ ಹೊಂದಿರುತ್ತವೆ. ಫೆಲ್ಡ್‍ಸ್ಟಾರ್‍ಗಳು ಆರ್ತೋಕ್ಲೇಸಿನಿಂದ ಪೇಜಿಯೋ ಕ್ಲೇಸಿನವರೆಗೂ ವ್ಯತ್ಯಾಸಹೊಂದಬಹುದು. ಕಪ್ಪು ಮತ್ತು ಬಿಳಿ ಅಭ್ರಕಗಳು, ಮತ್ತಿತರ ಖನಿಜಗಳು ಬಹಳ ಸ್ವಲ್ಪ ಪ್ರಮಾಣದಲ್ಲಿರಬಹುದು.

	ಆಪ್ಲೈಟುಗಳು ಬಿತ್ತಿಗಳ (ಡೈಕ್ಸ್) ಹಾಗೂ, ಸಣ್ಣಸಣ್ಣ ದಾರಗಳಂತೆಯೂ, ಸಾಮಾನ್ಯವಾಗಿ ಕೆಲವೇ ಅಡಿಗಳ ಅಗಲ ಉಳ್ಳದ್ದಾಗಿಯೂ ಇರುತ್ತವೆ. ಅವುಗಳ ಅಂಚುಗಳು ಸ್ಪಷ್ಟವಾಗಿಯಾದರೂ ಇರಬಹುದು. ಅವು ಸುತ್ತುಮುತ್ತಲಿನ ಕಲ್ಲುಗಳೊಡನೆ ಹೊಂದಿಕೊಂಡಿರಬಹುದು. ಕೆಲವು ತಮ್ಮ ಅಂಚುಗಳಿಗೆ ನೇರವಾಗಿ ಪಟ್ಟಿಗಳನ್ನು ಹೊಂದಿರಬಹುದು (ಬ್ಯಾಂಡೆಡ್). ಸಾಮಾನ್ಯವಾಗಿ ಇವು ದೊಡ್ಡ ದೊಡ್ಡ ಗ್ರಾನೈಟ್ ಮಹಾಶಿಲೆಗಳಲ್ಲಿ ಇರುತ್ತವೆ. ಇತರ ಶಿಲೆಗಳಲ್ಲಿ ಬಹಳ ಅಪೂರ್ವವಾಗಿ ದೊರೆಯುತ್ತವೆ. ಸಾಮಾನ್ಯವಾಗಿ ಇವು ಪೆಗ್ಮಟೈಟ್‍ಗಳ ಜೊತೆಯಲ್ಲಿರುತ್ತವೆ. ಪೆಗ್ಮಟೈಟ್ ಮತ್ತು ಆಪ್ಲೈಟುಗಳ ಸಂಬಂಧ ಅನೇಕ ವಿಧವಾಗಿರಬಹುದು. ಒಂದನ್ನೊಂದು ಹೊಂದಿಕೊಂಡಿರಬಹುದು ಅಥವಾ ಒಂದಕ್ಕೊಂದು ನೇರವಾಗಿರಬಹುದು. ಅಥವಾ ಒಂದರಲ್ಲೊಂದು ತ್ಯಾಪೆಗಳಂತೆಯೂ ಮಚ್ಚೆಗಳಂತೆಯೂ ಇರಬಹುದು.

	ಆಪ್ಲೈಟುಗಳು ವಿವಿಧ ರೀತಿಯಲ್ಲಿ ಉದ್ಭವಿಸುತ್ತವೆ. ಬಿರುಕುಗಳಲ್ಲಿ ಗ್ರಾನೈಟುಗಳ ಅಥವಾ ಪೆಗ್ಮಟೈಟುಗಳ ಪುನಃ ಸ್ಫಟೀಕರಣದಿಂದ ಉದ್ಭವಿಸುತ್ತವೆ. ಇನ್ನು ಕೆಲವು ಶಿಲಾಂತಸ್ಸರ ಸ್ಥಾನಪಲ್ಲಟದಿಂದ (ಮೆಟಸೊಮಾಟಿಸಂ) ಉಂಟಾಗುತ್ತವೆ. ಹಲವಾರು ಗ್ರಾನೈಟ್ ಶಿಲಾರಸದ ಸ್ಫಟೀಕರಣದ ಸಮಯದಲ್ಲಿ ಉದ್ಭವಿಸಿದ ಶೇಷ ದ್ರಾವಣಗಳಿಂದ (ರೆಸಿಡ್ಯೂಯಲ್ ಸೊಲ್ಯೂಷನ್ಸ್) ಉದ್ಭವಿಸುತ್ತವೆ. ಈ ಶೇಷ ದ್ರಾವಣಗಳಲ್ಲಿ ಅನಿಲಗಳು ಹಾಗೇ ಉಳಿದರೆ ಪೆಗ್ಮಟೈಟುಗಳುಂಟಾಗುತ್ತದೆ. ಅನಿಲಗಳು ಉಳಿಯದೇ ಹೋದಲ್ಲಿ ಆಪ್ಲೈಟುಗಳುಂಟಾಗುತ್ತದೆ.	
	(ಎಸ್.ಬಿ.ಎಲ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ